ಮೌಲ್ಯಗಳನ್ನು ರಕ್ತಗತ ಮಾಡಿಸಿದ ಪರಮ ಗುರುಗಳು ...
ಡಿ ಛಂಛಂ ವಿದ್ಯೆ ಘಂ ಘಂ ... ಎಂಬ ಗಾದೆಯನ್ನು ಆಗಾಗ್ಗೆ ಕೇಳುತ್ತಿದ್ದೆವಷ್ಟೆ. ಅದು ಅನುಭವಕ್ಕೆ ಬಂದಿರಲಿಲ್ಲ. ಶಿಕಾರಿಪುರದಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಾಲೆ ಕಲಿತಿದ್ದರಿಂದ ಆಗಿನ ಸಂದರ್ಭಕ್ಕೆ ಇಂಗ್ಲಿಷ್ ಎಂಬುದು ಸಲ್ಪ ಕಷ್ಟವೇ. ಎಂ.ಬಿ. ಲಕ್ಷ್ಮೀಕಾಂತ್ ಮೇಷ್ಟ್ರು ಗಣಿತ ಹಾಗೂ ಇಂಗ್ಲಿಷ್ ಬೋಧನೆ ಮಾಡುತ್ತಿದ್ದರು. ಇವೆರಡೂ ವಿಷಯದಲ್ಲಿ ಪರ್ಫೆಕ್ಟ್ ಆದರೆ ಜಗತ್ತಿನಲ್ಲಿ ಎಲ್ಲಾದರೂ ಬದುಕಬಹುದು ಎಂದು ಆಗಾಗ್ಗೆ ಹೇಳುತ್ತಿದ್ದರು. ಅವರ ಪಾಠಗಳೂ ಅಷ್ಟೇ ಅರ್ಥಪೂರ್ಣ. ಶೇಕ್ಸ್‌ಪಿಯರ್ ನಾಟಕ, ಶೆಲ್ಲಿಯ ಪದ್ಯವನ್ನು ಅವರು ಕಣ್ಣೆದುರಿಗೆ ಕಟ್ಟುವಂತೆ ಚಿತ್ರಿಸುತ್ತಿದ್ದ ಪರಿ ಇಂದಿಗೂ ಮನದಿಂದ ಮಾಸಿಲ್ಲ.
7 ನೇ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ಮೊದಲ ಪದ್ಯ ‘ ಸೆಂಟಿಪೇಡ್ ’ (ಕಪ್ಪೆಯ ವ್ಯಂಗ್ಯೋಕ್ತಿಯಿಂದ ಭ್ರಮನಿರಸನಗೊಂಡಿದ್ದ ಸಹಸ್ರಪದಿಯೊಂದು ಸ್ವಯಂ ಪ್ರೇರಣೆಯಿಂದಲೇ ಕ್ರಿಯಾಶೀಲವಾಗುವುದು ಪದ್ಯದ ಸಾರ) 14 ಸಾಲಿನ ಪದ್ಯವನ್ನು ಬೋಧಿಸಿದ ಅವರು ‘ಒಂದು ವಾರದಲ್ಲಿ ಕಂಠಪಾಠ ಮಾಡಿ ಒಪ್ಪಿಸಬೇಕು’ ಎಂದು ತರಗತಿಯಲ್ಲಿ ಸೂಚಿಸಿದ್ದರು. ಕಲಿತರಾಯಿತು ಬಿಡು ಎಂಬ ಹುಡುಗಾಟ. ವಾರದ ನಂತರ ಒಬ್ಬೊಬ್ಬರನ್ನೇ ಕೇಳುತ್ತಾ ಬಂದರು. ಮೊದಲ ಸಾಲಿನಲ್ಲಿ ಐದನೆಯವನಾದ ನನ್ನ ವರೆಗೂಎಲ್ಲರೂ ತಲೆ ತಗ್ಗಿಸಿ ನಿಲ್ಲುವ ಸರದಿ. ಅಷ್ಟರಲ್ಲೇ ಗೀತಾ ಪಟಪಟನೆ ಪದ್ಯ ಹೇಳಿ ಒಪ್ಪಿಸಿಬಿಟ್ಟಳು.
ಕೂಡಲೇ ನನ್ನ ಮುಖ ನೋಡಿದ ಮೇಷ್ಟ್ರಿಗೆ ಏನಾಯಿತೋ ಗೊತ್ತಿಲ್ಲ. ಕೈಲಿದ್ದ ಇಂಗ್ಲಿಷ್ ಪುಸ್ತಕದ ಸಮೇತ ಕಪಾಳಕ್ಕೆ ಎರಡು ಬಿಗಿದರು. ಧಾರಾಕಾರವಾಗಿ ಕಣ್ಣೀರು ಹರಿಯಿತು. ಟೀಚರ್ ಮಗನಾದ ನೀನು ಎಲ್ಲರಿಗಿಂತ ಮೊದಲೇ ಕಂಠಪಾಠ ಮಾಡಿರುತ್ತೀಯಾ ಎಂದುಕೊಂಡಿದ್ದೆ... ಎಂದು ಗುಡುಗಿಬಿಟ್ಟರು. ನಾನು ಮೇಷ್ಟ್ರಿಂದ ಹೊಡೆತ ತಿಂದದ್ದು ಇದೇ ಮೊದಲು ಹಾಗೂ ಇದೇ ಕೊನೆ. ಅಂದೇ ರಾತ್ರಿ ಪದ್ಯ ಕಂಠಪಾಠ ಮಾಡಿ ಮರುದಿನ ಒಪ್ಪಿಸಿದೆ. ಹೊಡೆತದ ಬಿಸಿ ಪದ್ಯವನ್ನು ಸಂಪೂರ್ಣ ಕಂಠಸ್ಥವಾಗಿಸಿತ್ತು. 30 ವರ್ಷವಾದರೂ ಕಲಿತ ಪದ್ಯ ಮನದಿಂದ ಮಾಸಿಲ್ಲ. ಮೂರು ವರ್ಷದ ಹಿಂದೆ ಆಕಾಶವಾಣಿಗಾಗಿ ಮೇಷ್ಟ್ರ ಸಂದರ್ಶನ ಮಾಡುವ ಸೌಭಾಗ್ಯ ಸಿಕ್ಕಿತ್ತು. ಕೊನೆಯಲ್ಲಿ ಇಡೀ ಪದ್ಯವನ್ನು ಅವರೆದುರು ಹೇಳಿ ಒಪ್ಪಿಸಿದೆ.
ಕೈ ನಡುಗುತ್ತಿದ್ದರೂ ನನ್ನನ್ನು ಬಿಗಿದಪ್ಪಿಕೊಂಡ ಸರ್ ಕಣ್ಣಲ್ಲಿ ಆನಂದ ಬಾಷ್ಪ . ನನ್ನ ಕೈಲಿ ಹೊಡೆಸಿಕೊಂಡು ಪದ್ಯ ಕಲಿತವನು 3 ದಶಕದ ನಂತರವೂ ಮರೆಯದೇ ಹುಡುಕಿಕೊಂಡು ಬಂದು ಒಪ್ಪಿಸಿದ್ದಾನೆಂದು ನಾಲ್ವರು ಮೊಮ್ಮಕ್ಕಳಿಗೆ ನನ್ನನ್ನು ಪರಿಚಯಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಡಿ ಛಂಛಂ ...ವಿದ್ಯೆ ಘಂ ಘಂ . . ಈಗ ಘನ ಉದ್ದೇಶಕ್ಕಾಗಿ ಹೊಡೆಯುವ ಮೇಷ್ಟ್ರೂ ಕಡಿಮೆ, ಕಲಿತದ್ದನ್ನು ಸೆಮಿಸ್ಟರ್ ಕಳೆದ ನಂತರ ನೆನಪಿಟ್ಟುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. \
******
ಹಿಂದೀ ಶಿಕ್ಷಕರಾದ ಕೆ. ವಿಜೇಂದ್ರಾಚಾರ್ ಸದ್ಯ ಹೊಳೆಹೊನ್ನೂರು ನಿವಾಸಿ. ಹೈಸ್ಕೂಲಿನಲ್ಲಿ ಇವರು ಕೇವಲ ಭಾಷಾ ಶಿಕ್ಷಕರಾಗಿರಲಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ಕಲಿಸುವ ಶಿಲ್ಪಿ. ಪಾಠ ಮಾಡಿ ಅವರು ಹೊರಟ ನಂತರವೂ ನಾಲ್ಕೈದು ಮಂದಿ ಅವರನ್ನು ಅಂಟಿಕೊಂಡೇ ಇರುವಷ್ಟು ಬಾಂಧವ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ದಿನ ಅವರನ್ನು ಭೇಟಿಯಾಗಲು ಹೋದೆ. ಇಂಥಾ ಗುರುಗಳನ್ನು ಅಗಲಬೇಕೆಂಬ ದುಃಖ. ‘ನೋಡಪ್ಪಾ ನಮ್ಮ ಜೀವನದ ರಥ ನೆಲೆ ನಿಂತಿದೆ. ನಿಮ್ಮ ರಥ ಈಗ ಮುಖ್ಯ ಹಾದಿಯಲ್ಲಿ ಸಾಗುತ್ತಿದೆ. ಮೀಸೆ ಚಿಗುರುತ್ತಿರುವ ಕಾಲಘಟ್ಟದಲ್ಲಿ ಅಪ್ಪನಿಂದ ಆದಷ್ಟೂ ಹಣ ಕೇಳುವುದನ್ನು ಕಡಿಮೆ ಮಾಡಿ. ಸ್ವಾವಲಂಬನೆ ಮಂತ್ರ ನಿನ್ನದಾಗಲಿ’ ಎಂದು ಹರಸಿದರು. ಮೊದಲಿಂದಲೂ ಹಣದ ವಿಚಾರದಲ್ಲಿ ಅಂತರ ರೂಢಿಸಿದ್ದ ಅಪ್ಪನ ಬಳಿ ಎಂದೆಂದೂ ಹಣ ಕೇಳದೇ ಶಿಕ್ಷಣ ಪೂರೈಸಿದೆ. ‘ಮೇಷ್ಟ್ರು ಹೇಳಿದ ಕಿವಿಮಾತು ’ ಸಾಕಷ್ಟು ಕೆಲಸ ಮಾಡಿತ್ತು. - ಮೌಲ್ಯಗಳನ್ನು ರಕ್ತಗತ ಮಾಡಿಸುವ ಕೆವಿಸಿ ಅವರಂಥಹಾ ಶಿಕ್ಷಕರು ಈಗ ವಿರಳಾತಿವಿರಳ.
ಶಿಕ್ಷಕರ ದಿನಾಚರಣೆ ಎಲ್ಲೆಡೆ ವಿಜೃಂಭಣೆಯಿಂದ ನಡೆದಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಕೈ ಒಡ್ಡದೇ ವಿದ್ಯಾರ್ಥಿಗಳೇ ನನ್ನ ಆಸ್ತಿ. ಅವರ ಪ್ರಗತಿಯೇ ನನಗೆ ಪ್ರಶಸ್ತಿ ಎಂಬ ಪರಮ ಧ್ಯೇಯವನ್ನು ವ್ರತವಾಗಿ ಸ್ವೀಕರಿಸಿದ ಈ ಇಬ್ಬರು ಆದರ್ಶ ಶಿಕ್ಷಕರು ಹಾಗೇ ನೆನಪಿಗೆ ಬಂದರು. ಇಂಥವರಿಗೆ ಹ್ಯಾಟ್ಸ್ ಆಫ್