Tuesday, November 18, 2014
Friday, October 24, 2014
Sunday, October 19, 2014
Tuesday, October 7, 2014
Monday, October 6, 2014
Himalaya Yatre Nenapu by AR Raghurama Shimoga
ಹುಚ್ಚು ಖೋಡಿ ಮನಸ್ಸಿನ ಹಿಮಾಲಯ ಯಾತ್ರೆ
ಮೊದಲಿಂದಲೂ ನನಗೆ ಸಲ್ಪ ತಿರುಗಾಟದ ಹುಚ್ಚು. ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೂ ಅಷ್ಟೇ. ಶಿಕಾರಿಪುರದಲ್ಲಿ ಐದು ಮೈಲಿ ದೂರದ ಕುಮಧ್ವತಿ ನದಿಗೆ ಸ್ನೇಹಿತರೊಡನೆ ಈಜಲು ಹೋಗುವುದು, 3 ಮೈಲು ದೂರವಿದ್ದ ಮಾಲತೇಶ ಟಾಕೀಸಿಗೆ ರಾಜ್‌ಕುಮಾರನ ಸಿನಿಮಾ ನೋಡಲು ಓಡೋಡಿ ಹೋಗುವುದು ನನಗೆ ಅತ್ಯಂತ ಖುಷಿ ಕೊಡುತ್ತಿದ್ದ ಸಂಗತಿಗಳು.
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ಸೇರಿದಮೇಲಂತೂ ಅಪ್ಪನ ಗೆರೆಯನ್ನೂ ಮೀರಿ ನೈನೀತಾಲ್, ಅಂಡಮಾನು, ಗುಜರಾತು, ಬಿಹಾರ, ದಿಲ್ಲಿ- ಹೀಗೆ ವಯ್ಯಸ್ಸಿಗೆ ಮೀರಿದ ಸುತ್ತಾಟವೇ ಆಯಿತು. ಎಲ್ಲಿ ತಿರುಗಲು ಹೋಗಿದ್ದೆ ? - ಅಪ್ಪನ ಸಿಡುಕಿನ ಪ್ರಶ್ನೆಗೆ ನನ್ನ ಮೌನವೇ ಉತ್ತರವಾಗುತ್ತಿತ್ತು. ಬೈದೂ ಬೈದೂ ಅವರೇ ಸುಮ್ಮನಾಗುತ್ತಿದ್ದರೇ ಹೊರತೂ ನಾನಂತೂ ತುಟಿ ಬಿಚ್ಚದೇ ನನ್ನ ತಿರುಗಾಟವನ್ನು ಮುಂದುವರಿಸಿದ್ದೆ. ನನ್ನ ಈ ತಿರುಗುವ ಮನಸ್ಸನ್ನು ಅರಿತಿದ್ದ ಅ.ನಾ. ವಿಜೇಂದ್ರ ಒಂದು ದಿನ ಫೋನ್ ಮಾಡಿ ಹಿಮಾಲಯಕ್ಕೆ ಬರ‌್ತೀಯಾ ಎಂದ. ಮದುವೆಯಾಗಿ ಜವಾಬ್ದಾರಿ ಬಂದಿದೆ ಎಂಬ ಕಾರಣಕ್ಕೆ 2 ವರ್ಷದಿಂದ ರಾಜ್ಯದ ಗಡಿ ದಾಟಿರಲಿಲ್ಲ. ಈಗ 3 ತಿಂಗಳ ಮಗು, ಹೆಂಡತಿಯನ್ನು ಬಿಟ್ಟು ಹಿಮಾಲಯಕ್ಕೆ .... ?
ಯಾರಲ್ಲೂ ಹಿಂದೆ ಮುಂದೆ ಅಭಿಪ್ರಾಯ ಕೇಳದೇ ಓಕೆ. ನಾನೂ ಬರ‌್ತೀನಿ. ಟಿಕೆಟ್ ಬುಕ್ ಮಾಡಿಸೋ ವಿಜೇಂದ್ರ ಎಂದು ಹಣವನ್ನೂ ಕೊಟ್ಟುಬಿಟ್ಟೆ. ಆಮೇಲೆ ಶುರುವಾದ ಎಲ್ಲ ಅಗ್ನಿ ಪರೀಕ್ಷೆಯನ್ನೂ ಮೀರಿ 15 ದಿನದ ಚಾರಣಕ್ಕೆ ಮನಸ್ಸನ್ನು ಹುರಿಗೊಳಿಸಿಕೊಂಡೆ. ದಿಲ್ಲಿಯಿಂದ 8 ತಾಸು ಕ್ರಮಿಸಿದ ನಂತರ ಕುಲು. ಅಲ್ಲಿಂದಾ 30 ಕಿ.ಮೀ. ಕ್ರಮಿಸಿದ ನಂತರ ಸಿಗುವ ಪಾರ್ವತಿ ನದಿ ತೀರದಿಂದ ನಮ್ಮ ಚಾರಣ. ಹಲವು ವರ್ಷದಿಂದ ಹಿಮಾಲಯವನ್ನು ನೋಡಲೇಬೇಕು ಎಂಬ ನನ್ನ ಆಕಾಂಕ್ಷೆಗೆ ದಿನಗಣನೆ ಆರಂಭ. 2 ದಿನ ಕೊರೆಯುವ ಛಳಿಯಲ್ಲೇ ಹಿಮಾಲಯ ಪರಿಸರಕ್ಕೆ ಹೊಂದಿಕೊಳ್ಳುವ ತರಬೇತಿಯಲ್ಲಿ ಪಳಗಿ ಸೈ ಎನಿಸಿಕೊಂಡು ಬೆಳ್ಳಿ ಬೆಟ್ಟವನ್ನೇರಲು ಸಿದ್ಧರಾದೆವು. ತಂಡದಲ್ಲಿದ್ದ ಕೆಲವು ಹೈ ಫೈ ಚಾರಣಿಗರಿಂದ ಕೊಂಚ ದೂರ ಸರಿದು ಹೊಸತನ್ನು ಕಾಣಬೇಕೆಂದು ಹಪಾಹಪಿ ಇದ್ದ ಮಿತ್ರರನ್ನು ಹತ್ತಿರ ಮಾಡಿಕೊಂಡೆ. 1
8 ಸಾವಿರ ಅಡಿ ಕ್ರಮಿಸಲು 10 ದಿನ ಸವೆಸಿದ ಹಾದಿಯಂತೂ ಜೀವನದಲ್ಲಿ ಅವಿಸ್ಮರಣೀಯ. ನಿಗದಿತ ಸ್ಥಳಗಳಲ್ಲಿ ನಿರ್ಮಿಸಿದ್ದ ಟೆಂಟ್‌ಗಳಲ್ಲಿ ಸುರಿಯುವ ಹಿಮಪಾತ, ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡರೂ ಕಾಡಿದ ಜೀವಮಾನದ ಅವಿಸ್ಮರಣೀಯ ಚಳಿ, ಬೆಳ್ಳಿ ಬೆಟ್ಟಗಳ ನಡುವೆ ವಿಭಿನ್ನವಾಗಿ ಕಾಣುವ ಸೂರ್ಯೋದಯ, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾಗುವ ವರ್ಷಧಾರೆ, ಉರುಳುವ ನೀರ್ಗಲ್ಲುಗಳು, ಹಗಲೆಲ್ಲಾ ಭೋರ್ಗರೆಯುತ್ತಿದ್ದ ಜಲಪಾತ ಸಂಜೆಯಾದೊಡನೆಯೇ ಹಾಗೇ ಹೆಪ್ಪುಗಟ್ಟುವುದು ನಿಸರ್ಗದ ಕೌತುಕಗಳಾದರೆ, ಜಾರುವ ಹಿಮಗಲ್ಲುಗಳ ಮೇಲೆ ಹರಸಾಹಸ ಮಾಡಿಕೊಂಡು ಚಾರಣ ಮಾಡುವಾಗ ಎಲ್ಲಿ ಪ್ರಪಾತಕ್ಕೆ ಬಿದ್ದು ಸತ್ತು ಹೋಗುತ್ತೇವೆಯೋ ಎಂಬ ದುಗುಡ- ಹೊಟ್ಟೆಗೆ ಸಕಾಲಕ್ಕೆ ಸಿಗಟ್ಟುವಷ್ಟು ಹಿಟ್ಟು ಇಲ್ಲದೇ ಇವೆಲ್ಲವನ್ನೂ ಒಟ್ಟಿಗೇ ಅನುಭವಿಸುವ ಕಾಲಘಟ್ಟ.
ವಿಶ್ವದ ಸಂಪರ್ಕದಿಂದ ದೂರವೇ ಉಳಿಸಿ ತನ್ನದೇ ಆದ ಲೋಕದ ರೋಮಾಂಚನಗಳನ್ನು ದರ್ಶನ ಮಾಡಿಸುವ ಹಿಮಾಲಯ ನಿಜಕ್ಕೂ ಗ್ರೇಟ್. ! 9 ನೇ ತರಗತಿಯಲ್ಲಿ ಗಿರಿ ಶಿಖರ ಕನ್ನಡ ಪಠ್ಯದಲ್ಲಿ ಓದಿದ ತೇನ್‌ಸಿಂಗ್ ನೋರ್ಗೆ ಜೀವನ ಚರಿತ್ರೆ, ಅವನು ಪಟ್ಟ ಪಡಿಪಾಟಲುಗಳೆಲ್ಲಾ ನೆನಪಿಗೆ ಬಂದವು. 18 ಸಾವಿರ ಅಡಿ ಸರ್ಪಾಸ್ ಹತ್ತಲು 10 ದಿನ ನಾವು ತಿಣುಕಿದ್ದೆಲ್ಲಿ, ಗೌರಿ ಶಂಕರದೊಂದಿಗೆ ಜೀವಮಾನದ ಸಂಬಂಧ ಇಟ್ಟುಕೊಂಡಿದ್ದ ತೇನ್‌ಸಿಂಗ್ ಎಲ್ಲಿ ? ನಾನು ಊರಿಗೆ ಹಿಂದಿರುಗಿದ ಮೇಲೆ ಅನೇಕರಿಗೆ ಅಂತೂ ಹಠ ಮಾಡಿ ಹೋದ ಇವ ಬದುಕಿ ಬಂದನಪ್ಪಾ ಎಂಬ ಸಮಾಧಾನ. ನನ್ನ ವಲಯದವರಿಗೆಲ್ಲಾ ನೂರೆಂಟು ಪ್ರಶ್ನೆ, ಆತಂಕ, ದುಗುಡ ಹಾಗೂ ಕುತೂಹಲ ಕೆರಳಿಸಿದ್ದ ನನ್ನ ಹುಚ್ಚುಯಾತ್ರೆ ನನಗೆ ಕಲಿಸಿದ ಜೀವನದ ಪಾಠ ಅನನ್ಯ. ವಾವ್. ಇಂದಿಗೂ ಚಾರಣ ನೆನಪಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಮನಸು ಮತ್ತೆ ಇಂತಹಾ ಹುಚ್ಚು ಸಾಹಸಕ್ಕೆ ಯಾವಾಗ ನಿರ್ಧರಿಸುತ್ತದೆ ಎಂದು ಕಾಯುತ್ತಿದ್ದೇನೆ.
* ಎ.ಆರ್. ರಘುರಾಮ್
Sunday, September 21, 2014
ಮೌಲ್ಯಗಳನ್ನು ರಕ್ತಗತ ಮಾಡಿಸಿದ ಪರಮ ಗುರುಗಳು ..... AR Raghuram
ಮೌಲ್ಯಗಳನ್ನು ರಕ್ತಗತ ಮಾಡಿಸಿದ ಪರಮ ಗುರುಗಳು ...
ಡಿ ಛಂಛಂ ವಿದ್ಯೆ ಘಂ ಘಂ ... ಎಂಬ ಗಾದೆಯನ್ನು ಆಗಾಗ್ಗೆ ಕೇಳುತ್ತಿದ್ದೆವಷ್ಟೆ. ಅದು ಅನುಭವಕ್ಕೆ ಬಂದಿರಲಿಲ್ಲ. ಶಿಕಾರಿಪುರದಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಾಲೆ ಕಲಿತಿದ್ದರಿಂದ ಆಗಿನ ಸಂದರ್ಭಕ್ಕೆ ಇಂಗ್ಲಿಷ್ ಎಂಬುದು ಸಲ್ಪ ಕಷ್ಟವೇ. ಎಂ.ಬಿ. ಲಕ್ಷ್ಮೀಕಾಂತ್ ಮೇಷ್ಟ್ರು ಗಣಿತ ಹಾಗೂ ಇಂಗ್ಲಿಷ್ ಬೋಧನೆ ಮಾಡುತ್ತಿದ್ದರು. ಇವೆರಡೂ ವಿಷಯದಲ್ಲಿ ಪರ್ಫೆಕ್ಟ್ ಆದರೆ ಜಗತ್ತಿನಲ್ಲಿ ಎಲ್ಲಾದರೂ ಬದುಕಬಹುದು ಎಂದು ಆಗಾಗ್ಗೆ ಹೇಳುತ್ತಿದ್ದರು. ಅವರ ಪಾಠಗಳೂ ಅಷ್ಟೇ ಅರ್ಥಪೂರ್ಣ. ಶೇಕ್ಸ್‌ಪಿಯರ್ ನಾಟಕ, ಶೆಲ್ಲಿಯ ಪದ್ಯವನ್ನು ಅವರು ಕಣ್ಣೆದುರಿಗೆ ಕಟ್ಟುವಂತೆ ಚಿತ್ರಿಸುತ್ತಿದ್ದ ಪರಿ ಇಂದಿಗೂ ಮನದಿಂದ ಮಾಸಿಲ್ಲ.
7 ನೇ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ಮೊದಲ ಪದ್ಯ ‘ ಸೆಂಟಿಪೇಡ್ ’ (ಕಪ್ಪೆಯ ವ್ಯಂಗ್ಯೋಕ್ತಿಯಿಂದ ಭ್ರಮನಿರಸನಗೊಂಡಿದ್ದ ಸಹಸ್ರಪದಿಯೊಂದು ಸ್ವಯಂ ಪ್ರೇರಣೆಯಿಂದಲೇ ಕ್ರಿಯಾಶೀಲವಾಗುವುದು ಪದ್ಯದ ಸಾರ) 14 ಸಾಲಿನ ಪದ್ಯವನ್ನು ಬೋಧಿಸಿದ ಅವರು ‘ಒಂದು ವಾರದಲ್ಲಿ ಕಂಠಪಾಠ ಮಾಡಿ ಒಪ್ಪಿಸಬೇಕು’ ಎಂದು ತರಗತಿಯಲ್ಲಿ ಸೂಚಿಸಿದ್ದರು. ಕಲಿತರಾಯಿತು ಬಿಡು ಎಂಬ ಹುಡುಗಾಟ. ವಾರದ ನಂತರ ಒಬ್ಬೊಬ್ಬರನ್ನೇ ಕೇಳುತ್ತಾ ಬಂದರು. ಮೊದಲ ಸಾಲಿನಲ್ಲಿ ಐದನೆಯವನಾದ ನನ್ನ ವರೆಗೂಎಲ್ಲರೂ ತಲೆ ತಗ್ಗಿಸಿ ನಿಲ್ಲುವ ಸರದಿ. ಅಷ್ಟರಲ್ಲೇ ಗೀತಾ ಪಟಪಟನೆ ಪದ್ಯ ಹೇಳಿ ಒಪ್ಪಿಸಿಬಿಟ್ಟಳು.
ಕೂಡಲೇ ನನ್ನ ಮುಖ ನೋಡಿದ ಮೇಷ್ಟ್ರಿಗೆ ಏನಾಯಿತೋ ಗೊತ್ತಿಲ್ಲ. ಕೈಲಿದ್ದ ಇಂಗ್ಲಿಷ್ ಪುಸ್ತಕದ ಸಮೇತ ಕಪಾಳಕ್ಕೆ ಎರಡು ಬಿಗಿದರು. ಧಾರಾಕಾರವಾಗಿ ಕಣ್ಣೀರು ಹರಿಯಿತು. ಟೀಚರ್ ಮಗನಾದ ನೀನು ಎಲ್ಲರಿಗಿಂತ ಮೊದಲೇ ಕಂಠಪಾಠ ಮಾಡಿರುತ್ತೀಯಾ ಎಂದುಕೊಂಡಿದ್ದೆ... ಎಂದು ಗುಡುಗಿಬಿಟ್ಟರು. ನಾನು ಮೇಷ್ಟ್ರಿಂದ ಹೊಡೆತ ತಿಂದದ್ದು ಇದೇ ಮೊದಲು ಹಾಗೂ ಇದೇ ಕೊನೆ. ಅಂದೇ ರಾತ್ರಿ ಪದ್ಯ ಕಂಠಪಾಠ ಮಾಡಿ ಮರುದಿನ ಒಪ್ಪಿಸಿದೆ. ಹೊಡೆತದ ಬಿಸಿ ಪದ್ಯವನ್ನು ಸಂಪೂರ್ಣ ಕಂಠಸ್ಥವಾಗಿಸಿತ್ತು. 30 ವರ್ಷವಾದರೂ ಕಲಿತ ಪದ್ಯ ಮನದಿಂದ ಮಾಸಿಲ್ಲ. ಮೂರು ವರ್ಷದ ಹಿಂದೆ ಆಕಾಶವಾಣಿಗಾಗಿ ಮೇಷ್ಟ್ರ ಸಂದರ್ಶನ ಮಾಡುವ ಸೌಭಾಗ್ಯ ಸಿಕ್ಕಿತ್ತು. ಕೊನೆಯಲ್ಲಿ ಇಡೀ ಪದ್ಯವನ್ನು ಅವರೆದುರು ಹೇಳಿ ಒಪ್ಪಿಸಿದೆ.
ಕೈ ನಡುಗುತ್ತಿದ್ದರೂ ನನ್ನನ್ನು ಬಿಗಿದಪ್ಪಿಕೊಂಡ ಸರ್ ಕಣ್ಣಲ್ಲಿ ಆನಂದ ಬಾಷ್ಪ . ನನ್ನ ಕೈಲಿ ಹೊಡೆಸಿಕೊಂಡು ಪದ್ಯ ಕಲಿತವನು 3 ದಶಕದ ನಂತರವೂ ಮರೆಯದೇ ಹುಡುಕಿಕೊಂಡು ಬಂದು ಒಪ್ಪಿಸಿದ್ದಾನೆಂದು ನಾಲ್ವರು ಮೊಮ್ಮಕ್ಕಳಿಗೆ ನನ್ನನ್ನು ಪರಿಚಯಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಡಿ ಛಂಛಂ ...ವಿದ್ಯೆ ಘಂ ಘಂ . . ಈಗ ಘನ ಉದ್ದೇಶಕ್ಕಾಗಿ ಹೊಡೆಯುವ ಮೇಷ್ಟ್ರೂ ಕಡಿಮೆ, ಕಲಿತದ್ದನ್ನು ಸೆಮಿಸ್ಟರ್ ಕಳೆದ ನಂತರ ನೆನಪಿಟ್ಟುಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆ. \
******
ಹಿಂದೀ ಶಿಕ್ಷಕರಾದ ಕೆ. ವಿಜೇಂದ್ರಾಚಾರ್ ಸದ್ಯ ಹೊಳೆಹೊನ್ನೂರು ನಿವಾಸಿ. ಹೈಸ್ಕೂಲಿನಲ್ಲಿ ಇವರು ಕೇವಲ ಭಾಷಾ ಶಿಕ್ಷಕರಾಗಿರಲಿಲ್ಲ. ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ ಕಲಿಸುವ ಶಿಲ್ಪಿ. ಪಾಠ ಮಾಡಿ ಅವರು ಹೊರಟ ನಂತರವೂ ನಾಲ್ಕೈದು ಮಂದಿ ಅವರನ್ನು ಅಂಟಿಕೊಂಡೇ ಇರುವಷ್ಟು ಬಾಂಧವ್ಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ದಿನ ಅವರನ್ನು ಭೇಟಿಯಾಗಲು ಹೋದೆ. ಇಂಥಾ ಗುರುಗಳನ್ನು ಅಗಲಬೇಕೆಂಬ ದುಃಖ. ‘ನೋಡಪ್ಪಾ ನಮ್ಮ ಜೀವನದ ರಥ ನೆಲೆ ನಿಂತಿದೆ. ನಿಮ್ಮ ರಥ ಈಗ ಮುಖ್ಯ ಹಾದಿಯಲ್ಲಿ ಸಾಗುತ್ತಿದೆ. ಮೀಸೆ ಚಿಗುರುತ್ತಿರುವ ಕಾಲಘಟ್ಟದಲ್ಲಿ ಅಪ್ಪನಿಂದ ಆದಷ್ಟೂ ಹಣ ಕೇಳುವುದನ್ನು ಕಡಿಮೆ ಮಾಡಿ. ಸ್ವಾವಲಂಬನೆ ಮಂತ್ರ ನಿನ್ನದಾಗಲಿ’ ಎಂದು ಹರಸಿದರು. ಮೊದಲಿಂದಲೂ ಹಣದ ವಿಚಾರದಲ್ಲಿ ಅಂತರ ರೂಢಿಸಿದ್ದ ಅಪ್ಪನ ಬಳಿ ಎಂದೆಂದೂ ಹಣ ಕೇಳದೇ ಶಿಕ್ಷಣ ಪೂರೈಸಿದೆ. ‘ಮೇಷ್ಟ್ರು ಹೇಳಿದ ಕಿವಿಮಾತು ’ ಸಾಕಷ್ಟು ಕೆಲಸ ಮಾಡಿತ್ತು. - ಮೌಲ್ಯಗಳನ್ನು ರಕ್ತಗತ ಮಾಡಿಸುವ ಕೆವಿಸಿ ಅವರಂಥಹಾ ಶಿಕ್ಷಕರು ಈಗ ವಿರಳಾತಿವಿರಳ.
ಶಿಕ್ಷಕರ ದಿನಾಚರಣೆ ಎಲ್ಲೆಡೆ ವಿಜೃಂಭಣೆಯಿಂದ ನಡೆದಿದೆ. ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗೆ ಕೈ ಒಡ್ಡದೇ ವಿದ್ಯಾರ್ಥಿಗಳೇ ನನ್ನ ಆಸ್ತಿ. ಅವರ ಪ್ರಗತಿಯೇ ನನಗೆ ಪ್ರಶಸ್ತಿ ಎಂಬ ಪರಮ ಧ್ಯೇಯವನ್ನು ವ್ರತವಾಗಿ ಸ್ವೀಕರಿಸಿದ ಈ ಇಬ್ಬರು ಆದರ್ಶ ಶಿಕ್ಷಕರು ಹಾಗೇ ನೆನಪಿಗೆ ಬಂದರು. ಇಂಥವರಿಗೆ ಹ್ಯಾಟ್ಸ್ ಆಫ್
Saturday, September 13, 2014
Friday, September 12, 2014
Thursday, September 11, 2014
Subscribe to:
Posts (Atom)