Monday, October 6, 2014

Himalaya Yatre Nenapu by AR Raghurama Shimoga



  ಹುಚ್ಚು ಖೋಡಿ ಮನಸ್ಸಿನ ಹಿಮಾಲಯ ಯಾತ್ರೆ


 ಮೊದಲಿಂದಲೂ ನನಗೆ ಸಲ್ಪ ತಿರುಗಾಟದ ಹುಚ್ಚು. ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಲೂ ಅಷ್ಟೇ. ಶಿಕಾರಿಪುರದಲ್ಲಿ ಐದು ಮೈಲಿ ದೂರದ ಕುಮಧ್ವತಿ ನದಿಗೆ ಸ್ನೇಹಿತರೊಡನೆ ಈಜಲು ಹೋಗುವುದು, 3 ಮೈಲು ದೂರವಿದ್ದ ಮಾಲತೇಶ ಟಾಕೀಸಿಗೆ ರಾಜ್‌ಕುಮಾರನ ಸಿನಿಮಾ ನೋಡಲು ಓಡೋಡಿ ಹೋಗುವುದು ನನಗೆ ಅತ್ಯಂತ ಖುಷಿ ಕೊಡುತ್ತಿದ್ದ ಸಂಗತಿಗಳು.

ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ಸೇರಿದಮೇಲಂತೂ ಅಪ್ಪನ ಗೆರೆಯನ್ನೂ ಮೀರಿ ನೈನೀತಾಲ್, ಅಂಡಮಾನು, ಗುಜರಾತು, ಬಿಹಾರ, ದಿಲ್ಲಿ- ಹೀಗೆ ವಯ್ಯಸ್ಸಿಗೆ ಮೀರಿದ ಸುತ್ತಾಟವೇ ಆಯಿತು. ಎಲ್ಲಿ ತಿರುಗಲು ಹೋಗಿದ್ದೆ ? - ಅಪ್ಪನ ಸಿಡುಕಿನ ಪ್ರಶ್ನೆಗೆ ನನ್ನ ಮೌನವೇ ಉತ್ತರವಾಗುತ್ತಿತ್ತು. ಬೈದೂ ಬೈದೂ ಅವರೇ ಸುಮ್ಮನಾಗುತ್ತಿದ್ದರೇ ಹೊರತೂ ನಾನಂತೂ ತುಟಿ ಬಿಚ್ಚದೇ ನನ್ನ ತಿರುಗಾಟವನ್ನು ಮುಂದುವರಿಸಿದ್ದೆ. ನನ್ನ ಈ ತಿರುಗುವ ಮನಸ್ಸನ್ನು ಅರಿತಿದ್ದ ಅ.ನಾ. ವಿಜೇಂದ್ರ ಒಂದು ದಿನ ಫೋನ್ ಮಾಡಿ ಹಿಮಾಲಯಕ್ಕೆ ಬರ‌್ತೀಯಾ ಎಂದ. ಮದುವೆಯಾಗಿ ಜವಾಬ್ದಾರಿ ಬಂದಿದೆ ಎಂಬ ಕಾರಣಕ್ಕೆ 2 ವರ್ಷದಿಂದ ರಾಜ್ಯದ ಗಡಿ ದಾಟಿರಲಿಲ್ಲ. ಈಗ 3 ತಿಂಗಳ ಮಗು, ಹೆಂಡತಿಯನ್ನು ಬಿಟ್ಟು ಹಿಮಾಲಯಕ್ಕೆ .... ?

 ಯಾರಲ್ಲೂ ಹಿಂದೆ ಮುಂದೆ ಅಭಿಪ್ರಾಯ ಕೇಳದೇ ಓಕೆ. ನಾನೂ ಬರ‌್ತೀನಿ. ಟಿಕೆಟ್ ಬುಕ್ ಮಾಡಿಸೋ ವಿಜೇಂದ್ರ ಎಂದು ಹಣವನ್ನೂ ಕೊಟ್ಟುಬಿಟ್ಟೆ. ಆಮೇಲೆ ಶುರುವಾದ ಎಲ್ಲ ಅಗ್ನಿ ಪರೀಕ್ಷೆಯನ್ನೂ ಮೀರಿ 15 ದಿನದ ಚಾರಣಕ್ಕೆ ಮನಸ್ಸನ್ನು ಹುರಿಗೊಳಿಸಿಕೊಂಡೆ. ದಿಲ್ಲಿಯಿಂದ 8 ತಾಸು ಕ್ರಮಿಸಿದ ನಂತರ ಕುಲು. ಅಲ್ಲಿಂದಾ 30 ಕಿ.ಮೀ. ಕ್ರಮಿಸಿದ ನಂತರ ಸಿಗುವ ಪಾರ್ವತಿ ನದಿ ತೀರದಿಂದ ನಮ್ಮ ಚಾರಣ. ಹಲವು ವರ್ಷದಿಂದ ಹಿಮಾಲಯವನ್ನು ನೋಡಲೇಬೇಕು ಎಂಬ ನನ್ನ ಆಕಾಂಕ್ಷೆಗೆ ದಿನಗಣನೆ ಆರಂಭ. 2 ದಿನ ಕೊರೆಯುವ ಛಳಿಯಲ್ಲೇ ಹಿಮಾಲಯ ಪರಿಸರಕ್ಕೆ ಹೊಂದಿಕೊಳ್ಳುವ ತರಬೇತಿಯಲ್ಲಿ ಪಳಗಿ ಸೈ ಎನಿಸಿಕೊಂಡು ಬೆಳ್ಳಿ ಬೆಟ್ಟವನ್ನೇರಲು ಸಿದ್ಧರಾದೆವು. ತಂಡದಲ್ಲಿದ್ದ ಕೆಲವು ಹೈ ಫೈ ಚಾರಣಿಗರಿಂದ ಕೊಂಚ ದೂರ ಸರಿದು ಹೊಸತನ್ನು ಕಾಣಬೇಕೆಂದು ಹಪಾಹಪಿ ಇದ್ದ ಮಿತ್ರರನ್ನು ಹತ್ತಿರ ಮಾಡಿಕೊಂಡೆ. 1

8 ಸಾವಿರ ಅಡಿ ಕ್ರಮಿಸಲು 10 ದಿನ ಸವೆಸಿದ ಹಾದಿಯಂತೂ ಜೀವನದಲ್ಲಿ ಅವಿಸ್ಮರಣೀಯ. ನಿಗದಿತ ಸ್ಥಳಗಳಲ್ಲಿ ನಿರ್ಮಿಸಿದ್ದ ಟೆಂಟ್‌ಗಳಲ್ಲಿ ಸುರಿಯುವ ಹಿಮಪಾತ, ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡರೂ ಕಾಡಿದ ಜೀವಮಾನದ ಅವಿಸ್ಮರಣೀಯ ಚಳಿ, ಬೆಳ್ಳಿ ಬೆಟ್ಟಗಳ ನಡುವೆ ವಿಭಿನ್ನವಾಗಿ ಕಾಣುವ ಸೂರ್ಯೋದಯ, ಇದ್ದಕ್ಕಿದ್ದಂತೇ ಪ್ರತ್ಯಕ್ಷವಾಗುವ ವರ್ಷಧಾರೆ, ಉರುಳುವ ನೀರ್ಗಲ್ಲುಗಳು, ಹಗಲೆಲ್ಲಾ ಭೋರ್ಗರೆಯುತ್ತಿದ್ದ ಜಲಪಾತ ಸಂಜೆಯಾದೊಡನೆಯೇ ಹಾಗೇ ಹೆಪ್ಪುಗಟ್ಟುವುದು ನಿಸರ್ಗದ ಕೌತುಕಗಳಾದರೆ, ಜಾರುವ ಹಿಮಗಲ್ಲುಗಳ ಮೇಲೆ ಹರಸಾಹಸ ಮಾಡಿಕೊಂಡು ಚಾರಣ ಮಾಡುವಾಗ ಎಲ್ಲಿ ಪ್ರಪಾತಕ್ಕೆ ಬಿದ್ದು ಸತ್ತು ಹೋಗುತ್ತೇವೆಯೋ ಎಂಬ ದುಗುಡ- ಹೊಟ್ಟೆಗೆ ಸಕಾಲಕ್ಕೆ ಸಿಗಟ್ಟುವಷ್ಟು ಹಿಟ್ಟು ಇಲ್ಲದೇ ಇವೆಲ್ಲವನ್ನೂ ಒಟ್ಟಿಗೇ ಅನುಭವಿಸುವ ಕಾಲಘಟ್ಟ.

 ವಿಶ್ವದ ಸಂಪರ್ಕದಿಂದ ದೂರವೇ ಉಳಿಸಿ ತನ್ನದೇ ಆದ ಲೋಕದ ರೋಮಾಂಚನಗಳನ್ನು ದರ್ಶನ ಮಾಡಿಸುವ ಹಿಮಾಲಯ ನಿಜಕ್ಕೂ ಗ್ರೇಟ್. ! 9 ನೇ ತರಗತಿಯಲ್ಲಿ ಗಿರಿ ಶಿಖರ ಕನ್ನಡ ಪಠ್ಯದಲ್ಲಿ ಓದಿದ ತೇನ್‌ಸಿಂಗ್ ನೋರ್ಗೆ ಜೀವನ ಚರಿತ್ರೆ, ಅವನು ಪಟ್ಟ ಪಡಿಪಾಟಲುಗಳೆಲ್ಲಾ ನೆನಪಿಗೆ ಬಂದವು. 18 ಸಾವಿರ ಅಡಿ ಸರ್ಪಾಸ್ ಹತ್ತಲು 10 ದಿನ ನಾವು ತಿಣುಕಿದ್ದೆಲ್ಲಿ, ಗೌರಿ ಶಂಕರದೊಂದಿಗೆ ಜೀವಮಾನದ ಸಂಬಂಧ ಇಟ್ಟುಕೊಂಡಿದ್ದ ತೇನ್‌ಸಿಂಗ್ ಎಲ್ಲಿ ? ನಾನು ಊರಿಗೆ ಹಿಂದಿರುಗಿದ ಮೇಲೆ ಅನೇಕರಿಗೆ ಅಂತೂ ಹಠ ಮಾಡಿ ಹೋದ ಇವ ಬದುಕಿ ಬಂದನಪ್ಪಾ ಎಂಬ ಸಮಾಧಾನ. ನನ್ನ ವಲಯದವರಿಗೆಲ್ಲಾ ನೂರೆಂಟು ಪ್ರಶ್ನೆ, ಆತಂಕ, ದುಗುಡ ಹಾಗೂ ಕುತೂಹಲ ಕೆರಳಿಸಿದ್ದ ನನ್ನ ಹುಚ್ಚುಯಾತ್ರೆ ನನಗೆ ಕಲಿಸಿದ ಜೀವನದ ಪಾಠ ಅನನ್ಯ. ವಾವ್. ಇಂದಿಗೂ ಚಾರಣ ನೆನಪಿಸಿಕೊಂಡರೆ ಮೈ ರೋಮಾಂಚನವಾಗುತ್ತದೆ. ಮನಸು ಮತ್ತೆ ಇಂತಹಾ ಹುಚ್ಚು ಸಾಹಸಕ್ಕೆ ಯಾವಾಗ ನಿರ್ಧರಿಸುತ್ತದೆ ಎಂದು ಕಾಯುತ್ತಿದ್ದೇನೆ.

 * ಎ.ಆರ್. ರಘುರಾಮ್

No comments:

Post a Comment